ಯಾಲ್ಟ-
	ಉಕ್ರೇನಿಯನ್ ಗಣರಾಜ್ಯದ ಒಂದು ಪಟ್ಟಣ ಹಾಗೂ ಬಂದರು. ಕಪ್ಪು ಸಮುದ್ರ ಪಕ್ಕದ ಕ್ರೀಮಿಯನ್ ಪರ್ಯಾಯ ದ್ವೀಪದ ದಕ್ಷಿಣ ತುದಿಯಲ್ಲಿದೆ. 19ನೆಯ ಶತಮಾನದಲ್ಲಿ ಅಭಿವೃದ್ಧಿಗೆ ಬಂದ ಇದು 1838ರಲ್ಲಿ ಪಟ್ಟಣವೆನಿಸಿತು. ಉತ್ತಮ ಹವಾಗುಣ, ಸುಂದರ ಪ್ರಕೃತಿದೃಶ್ಯಗಳಿಂದಾಗಿ ಒಂದು ಆರೋಗ್ಯ ವಿಶ್ರಾಂತಿಧಾಮವಾಗಿ ಪ್ರಸಿದ್ಧವಾಯಿತು. ಮಧ್ಯತಯಾರಿಕೆ, ಹಣ್ಣು ಮತ್ತು ಹೊಗೆ ಸೊಪ್ಪು ಇವುಗಳ ಸಂಸ್ಕರಣ ಕಾರ್ಖಾನೆಗಳೂ ಹೋಟೆಲು, ಆಸ್ಪತ್ರೆಗಳು ಇಲ್ಲಿವೆ.
 	ಈ ಪ್ರದೇಶ ಮೊದಲು ಗ್ರೀಕ್ ವಸಾಹತು ಆಗಿತ್ತು. ಕೆಲ ಶತಮಾನಗಳ ಅನಂತರ ಇದು ಜಿನೀವದ ಆಧಿಪತ್ಯಕ್ಕೆ ಒಳಪಟ್ಟಿತ್ತು. ಇಟಲಿಯ ಪುನರುಜ್ಜೀವನ ಕಾಲದ ಭವ್ಯಕಟ್ಟಡಗಳು ಇಲ್ಲಿವೆ. 15ನೆಯ ಶತಮಾನದಲ್ಲಿ ತುರ್ಕರು ಇದನ್ನು ಕೈವಶಮಾಡಿಕೊಂಡರು. 1793ರಲ್ಲಿ ರಷ್ಯನ್ನರು ಇದನ್ನು ತುರ್ಕರಿಂದ ಗೆದ್ದು ಕೊಂಡರು. 19ನೆಯ ಶತಮಾನದ ಪ್ರಾರಂಭದಲ್ಲಿ ಇದೊಂದು ಸಣ್ಣಹಳ್ಳಿಯಾಗಿದ್ದು ಝಾರ್ ಒಂದನೆಯ ನಿಕೋಲಸ್ ಇಲ್ಲಿ ಚಳಿಗಾಲದ ಅರಮನೆಯನ್ನು ಕಟ್ಟಿಸಿದ. ಎರಡನೆಯ ಮಹಾಯುದ್ಧದ ಅನಂತರ 1945ರಲ್ಲಿ ನಡೆದ ಸಮ್ಮೇಳನದಿಂದ ಯಾಲ್ಟ ಪ್ರಸಿದ್ಧವಾಯಿತು. ಅಮೆರಿಕದ ರೂಸ್‍ವೆಲ್ಟ್, ಬ್ರಿಟನ್ನಿನ ಚರ್ಚಿಲ್ ಮತ್ತು ರಷ್ಯದ ಸ್ಟಾಲಿನ್- ಈ ಮೂವರು ಕೂಡಿ ಜರ್ಮನಿಯ ಸಶಸ್ತ್ರ ದಬ್ಬಾಳಿಕೆಯ ವಿರುದ್ಧ ಕೆಳಕಂಡ ನಿರ್ಣಯಗಳನ್ನು ಮಾಡಿದರು. (1) ಅಮೆರಿಕ, ರಷ್ಯ, ಬ್ರಿಟನ್ ಮತ್ತು ಫ್ರಾನ್ಸ ಶರಣಾಗತ ಜರ್ಮನಿಯ ಒಂದೊಂದು ಭಾಗವನ್ನು ಹಂಚಿಕೊಳ್ಳುವುದು. (2) ಜರ್ಮನಿ ಇನ್ನೊಮ್ಮೆ ಯುದ್ಧವನ್ನು ಹೂಡದ ಹಾಗೆ ಅದರ ಸೈನ್ಯವನ್ನು ಕಿತ್ತುಹಾಕುವುದು. ಮತ್ತು ಎಲ್ಲಾ ಯುದ್ಧ ದ್ರೋಹಿಗಳನ್ನು ನ್ಯಾಯಾಲಯಕ್ಕೆ ತಂದು ಶಿಕ್ಷಿಸುವುದು. (3) ಜಗತ್ತಿನ ಶಾಂತಿಯನ್ನು ಕಾಪಾಡಲು ಒಂದು ಜಾಗತಿಕ ಸಂಸ್ಥೆಯನ್ನು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸ್ಥಾಪಿಸುವುದು. ವೀಟೋ ಹಕ್ಕನ್ನು ಭದ್ರತಾ ಸಮಿತಿಯಲ್ಲಿ ಶಾಂತಿ ಪಾಲನೆಗಾಗಿ ಉಪಯೋಗಿಸುವುದು ಎಂದು ನಿರ್ಧರಿಸಲಾಯಿತು.
												(ಜಿ.ಎಸ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ